ಗೊಮ್ಮಟೇಶ್ವರ-
ಆದಿ ತೀರ್ಥಂಕರನಾದ ವೃಷಭನಾಥನ (ಪುರುದೇವ) ಕಿರಿಯ ಮಗ. ದೋರ್ಬಲಿ, ಬಾಹುಬಲಿ, ಕುಕ್ಕಟೇಶ್ವರ-ಇವು ಪರ್ಯಾಯನಾಮಗಳು. ಭರತ ಚಕ್ರವರ್ತಿ ಈತನ ಅಣ್ಣ. ಭರತ ಆದಿ ಚಕ್ರವರ್ತಿಯಾದರೆ ಬಾಹುಬಲಿ ಆ ಕಾಲದ ಮನ್ಮಥ. ವಯಸ್ಸಿಗೆ ಬಂದ ಮೇಲೆ ಬಾಹುಬಲಿಗೆ ಪೌದನಗರದ ರಾಜ್ಯ ಪ್ರಾಪ್ತವಾಯಿತು. ತನ್ನ ಅಧಿಪತ್ಯ ಮತ್ತು ಸಾಮಥ್ರ್ಯದ ಬಗ್ಗೆ ಇವನಿಗೆ ಬಹಳ ಹೆಮ್ಮೆಯಿತ್ತು. ಆದ್ದರಿಂದ ಅಣ್ಣನಾದ ಭರತನ ಅಧಿರಾಜ್ಯ ಈತನಿಗೆ ಅಸಹನೀಯವಾಯಿತು. ಭರತನಾದರೋ ತನ್ನ ಭಂಡಾರದಲ್ಲಿ ಉದಿಸಿದ ಚಕ್ರರತ್ನದಿಂದ ಸಮಸ್ತ ಭೂಮಂಡಲವನ್ನೂ ಗೆದ್ದನಲ್ಲದೆ ತಮ್ಮನಾದ ಬಾಹುಬಲಿಗೂ ತನಗೆ ಕಪ್ಪವೊಪ್ಪಿಸಬೇಕೆಂದು ಆಶಿಸಿದ.

ಅತ್ಯಂತ ಸ್ವಾಭಿಮಾನಿಯಾದ ಬಾಹುಬಲಿ ಅದಕ್ಕೆ ಸಮ್ಮತಿಸಲಿಲ್ಲ. ಇಬ್ಬರ ನಡುವೆ ಯುದ್ಧದ ಪ್ರಸಂಗ ಒದಗಿ ಬಂತು. ಯುದ್ಧದಲ್ಲಿ ಸೈನಿಕರು ಸಾವಿಗೀಡಾಗಬಾರದೆಂಬ ಉದ್ದೇಶದಿಂದ ಸಹೋದರರು ತಾವಿಬ್ಬರೇ ಪರಸ್ಪರ ಯುದ್ಧ ಮಾಡಲು ಸಿದ್ಧರಾದರು. ಜಲ, ಮಲ್ಲ ಮತ್ತು ದೃಷ್ಟಿಯುದ್ಧಗಳಲ್ಲಿ ಬಾಹುಬಲಿ ಭರತನನ್ನು ಗೆದ್ದ. ಭರತ ಕನಲಿ ತಮ್ಮನ ಮೇಲೆ ಚಕ್ರವನ್ನು ಪ್ರಯೋಗಿಸಿದ. ಆದರೆ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಭರತ ಸೋತ. ಬಾಹುಬಲಿ ಗೆದ್ದ. ಗೆದ್ದರೂ ಆ ರೀತಿ ತನ್ನ ಅಣ್ಣನನ್ನು ಹಿಮ್ಮೆಟ್ಟಿಸಿ, ರಾಜ್ಯವನ್ನು ಆಳುವುದಕ್ಕಿಂತ ಸಂಸಾರವನ್ನು ತ್ಯಜಿಸುವುದೇ ಲೇಸೆಂದು ಬಗೆದು ಬಾಹುಬಲಿ ತನ್ನ ರಾಜ್ಯವನ್ನು ಗೆದ್ದ ರಾಜ್ಯವನ್ನೂ ಭರತನಿಗೇ ಕೊಟ್ಟು ವಿರಕ್ತನಾಗಿ ಮುನಿದೀಕ್ಷೆಯನ್ನು ತೆಗೆದುಕೊಂಡು ಒಂದು ವರ್ಷದ ವರೆಗೆ ಪ್ರತಿಮಾಯೋಗದಿಂದ ಕಠಿಣ ತಪಸ್ಸನ್ನು ಮಾಡಿದ. ಸುತ್ತಲೂ ಹುತ್ತಗಳು ಬೆಳೆಯುವುದಲ್ಲದೆ ಮೈಮೇಲೆ ಬಳ್ಳಿಗಳು ಹಬ್ಬಿದವು. ಇಷ್ಟು ತ್ಯಾಗವನ್ನು ಮೆರೆದರೂ ತಾನು ನಿಂತಿರುವ ಭೂಮಿ ಭರತನದು ಎಂಬ ಒಂದು ಚಿಂತೆ ಬಾಹುಬಲಿಯನ್ನು ಕೊರೆಯುತ್ತಿತ್ತಂತೆ. ಇದನ್ನರಿತ ಅಣ್ಣ ಬಾಹುಬಲಿಯಲ್ಲಿಗೆ ಬಂದು ಕಾಲಿಗೆರಗಿ ಮನಃಕಷಾಯವನ್ನು ಬಿಡುವಂತೆ ಬೇಡಿಕೊಂಡಾಗ ಬಾಹುಬಲಿಗೆ ಕೇವಲ ಜ್ಞಾನ ಪ್ರಾಪ್ತವಾಯಿತಂತೆ.

 ಬೊಪ್ಪಣ ಕವಿ ಬಾಹುಬಲಿಯ ಗುಣಾತಿಶಯಗಳನ್ನು ಹೀಗೆ ಹೊಗಳಿದ್ದಾನೆ: 
 ಅನುಪಮ ರೂಪನೇ ಸ್ಮರನುದಗ್ರನೇ 
		ನಿರ್ಜಿತಚಕ್ರಿ ಮತ್ತುದಾ
 ರನೆ ನೆರೆಗೆಲ್ದು ಮಿತ್ತ ನಖಿಲೋರ್ವಿಯ
		ನತ್ಯಭಿಮಾನಿಯೇ ತಪಃ
 ಸ್ಥನುಮೆರಡಂಘ್ರಿಯಿತ್ತೆಳೆಯೊಳಿರ್ದ
		ಪುದೆಂಬನನೂನಬೋಧನೇ
 ವಿನಿಹತಕರ್ಮಬಂಧನೆನೆ ಬಾಹುಬಲೀಶ
		ನಿದೇನುದಾತ್ತನೋ

ವೈರಾಗ್ಯನಿಧಿಯಾಗಿ ಪ್ರತಿಮಾಯೋಗದಲ್ಲಿ ತಪಸ್ಸಿಗೆ ನಿಂತು ಮುಕ್ತಿಯನ್ನು ಸಾಧಿಸಿದ ಬಾಹುಬಲಿಯ ಪ್ರತಿಮೆ ಪಂಚಪರ ಮೇಷ್ಠಿಗಳ ಪ್ರತಿಮೆಯಂತೆ ಪೂಜನೀಯವಾಗಿದೆ. ಬಾಹುಬಲಿಯ ಪೂಜೆ ದಕ್ಷಿಣ ದೇಶದಲ್ಲಿ ಬಹುಕಾಲದಿಂದ ನಡೆಯುತ್ತ ಬಂದಿದೆ. ಸ್ವಯಂ ಭರತನೇ ಬಾಹುಬಲಿಯ 525 ಧನುಷ್ಯ ಎತ್ತದ ಮೂರ್ತಿಯನ್ನು ಸ್ಥಾಪಿಸಿದನೆಂಬ ಆಖ್ಯಾನಕವಿದೆ. ಬಾಹುಬಲಿಯ ಪ್ರತಿಮೆಗಳು ಬಾದಾಮಿ ಮೊದಲಾದ ಸ್ಥಳಗಳಲ್ಲಿ ದೊರೆಯುತ್ತದೆ.

ಬೆಂಗಳೂರಿನಿಂದ ಸುಮಾರು 160 ಕಿ.ಮೀ. ಮತ್ತು ಮೈಸೂರಿನಿಂದ ಸುಮಾರು 80 ಕಿ.ಮೀ. ಅಂತರದಲ್ಲಿ ಹಾಸನಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಶ್ರವಣಬೆಳ್ಗೊಳವೆಂಬ ಪ್ರಸಿದ್ಧ ಜೈನ ತೀರ್ಥಕ್ಷೇತ್ರವಿದೆ. ಅಲ್ಲಿಯ ಶಿಲಾಲೇಖಗಳ ಮೇಲಿಂದ ಚಂದ್ರಗುಪ್ತ ಮೌರ್ಯ ತನ್ನ ಗುರುವಾದ ಭದ್ರಬಾಹುವಿನ ಸಂಗಡ ಅಲ್ಲಿಗೆ ಬಂದು ಸಲ್ಲೇಖನ ವ್ರತವನ್ನು ಹಿಡಿದು ಮರಣವನ್ನು ಅಪ್ಪಿದನೆಂದು ತಿಳಿದುಬರುತ್ತದೆ. ಊರು ಚಿಕ್ಕದು. ಒಂದು ಪ್ರಶಾಂತವಾದ ಸರೋವರ ಸಮೀಪದಲ್ಲಿದೆ. ಎರಡೂ ಕಡೆ ವಿಂಧ್ಯಗಿರಿ (ದೊಡ್ಡ ಬೆಟ್ಟ) ಮತ್ತು ಚಂದ್ರಗಿರಿ (ಚಿಕ್ಕಬೆಟ್ಟ) ಎಂಬ ಎರಡು ಕಲ್ಲಿನ ದಿಬ್ಬಗಳಿವೆ. ದೊಡ್ಡ ಬೆಟ್ಟದ ತುದಿಯಲ್ಲಿ ಕಲ್ಲಿನ ಸುತ್ತಾಲಯದ ನಡುವೆ ಅಖಂಡ ಶಿಲೆಯಲ್ಲಿ ಕೆತ್ತಿದ ಬಾಹುಬಲಿಯ 58' ಎತ್ತರದ ಭವ್ಯಮೂರ್ತಿ ಉತ್ತರಾಭಿಮುಖವಾಗಿ ನಿಂತಿದೆ. ಈ ಮೂರ್ತಿ ಗೊಮ್ಮಟೇಶ್ವರ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ಬಾಹುಬಲಿ ಪ್ರತಿಮಾಯೋಗವನ್ನು ಧಾರಣಮಾಡಿ, ಧ್ಯಾನ ಮಾಡುತ್ತಿರುವ ಸನ್ನಿವೇಶವನ್ನಿದು ತೋರಿಸುತ್ತದೆ. ಮುಖಮುದ್ರೆ ಪ್ರಶಾಂತವೀರಾಗಭಾವವನ್ನು ಸೂಸುತ್ತದೆ. ಕಾಲುಗಳ ಕೆಳಗೆ ಕಮಲವಿದೆ. ಎರಡೂ ಬದಿಗೆ ಹಾವಿನ ಹುತ್ತಗಳಿವೆ. ಮಾಧವೀಲತೆ ಕೈಕಾಲುಗಳ ಮೇಲೆ ಹಬ್ಬಿದೆ.

ಗೊಮ್ಮಟೇಶ್ವರ ವಿಗ್ರಹ ವಿಷಯವಾಗಿ ಹಲವು ಕಥೆಗಳು ಪ್ರಚಲಿತವಿವೆ. ಪ್ರತಿಮೆಯ ಮೇಲೆ ದೊರೆಯುವ ಶಿಲಾಲೇಖನದಿಂದ ಚಾವುಂಡರಾಯ ಇದನ್ನು ಮಾಡಿಸಿದನೆಂದು ತಿಳಿದುಬರುತ್ತದೆ. ಈತ ಗಂಗವಂಶದ ರಾಚಮಲ್ಲನ (924-984) ದಂಡಾಧಿಪತಿಯೂ ಮಂತ್ರಿಯೂ ಆಗಿದ್ದ. ಸುಮಾರು 982ರಲ್ಲಿ ಈ ವಿಗ್ರಹವನ್ನು ಕೆತ್ತಿಸಿ ಮುಗಿಸಿರಬೇಕೆಂದು ತೋರುತ್ತದೆ.
ವಿಗ್ರಹದ ಸುರಕ್ಷಣೆಗಾಗಿ ಹೊಯ್ಸಳ ವಿಷ್ಣುವರ್ಧನನ ದಂಡಾಧಿಪತಿಯಾದ ಗಂಗರಾಜ ಸುತ್ತಲಯವನ್ನು ಕಟ್ಟಿಸಿದ (ಸುಮಾರು 1117). ಇದರ ಮಾಹಿತಿ ವಿಗ್ರಹದ ಮೇಲೆನ ಶಿಲಾಲೇಖನಗಳಿಂದ ಗೊತ್ತಾಗುತ್ತದೆ.

ಪೌದನಪುರದಲ್ಲಿಯ ಪ್ರತಿಮೆ ಆಗಮ್ಯವೆನಿಸಿದ್ದರಿಂದ ತನ್ನ ತಾಯಿ ದರ್ಶಿಸಲೆಂದು ಚಾವುಂಡರಾಯ ಈ ಮೂರ್ತಿಯನ್ನು ಕೆತ್ತಿಸಿದಂತೆ ಆಖ್ಯಾನಕವಿದೆ. ಈ ವಿಗ್ರಹಕ್ಕೆ ಗೊಮ್ಮಟೇಶ್ವರ ಎಂಬ ಹೆಸರು ಬಂದದ್ದು ಚಾವುಂಡರಾಯನಿಂದಲೇ. ನೇಮಿಚಂದ್ರಸಿದ್ಧಾಂತ ಚಕ್ರವರ್ತಿಯಿಂದ ರಚಿತವಾದ ಗೊಮ್ಮಟಸಾರವೆಂಬ ಗ್ರಂಥದಿಂದ ಚಾವುಂಡರಾಯನಿಗೆ ಗೊಮ್ಮಟರಾಯನೆಂಬ ಹೆಸರಿದ್ದುದೂ ಆತ ಬೆಳ್ಗೊಳದಲ್ಲಿ ಕಟ್ಟಿಸಿದ ಬಸದಿಯ ಮತ್ತು ಕೆತ್ತಿಸಿದ ಈ ವಿಗ್ರಹ ವಿಷಯವೂ ತಿಳಿಯುತ್ತದೆ. ಗೊಮ್ಮಟ ಅಂದರೆ ಸುಂದರ, ಚೆಲುವ ಮನ್ಮಥ ಎಂದರ್ಥ. ಇದು ಅವನ ಮನೆಯ ಹೆಸರಾಗಿರಬೇಕು. ಆತ ಕೆತ್ತಿಸಿದ ಈಶ್ವರ ಅಂದರೆ ಆರಾಧ್ಯ ದೇವತೆಯ ಹೆಸರು ಗೊಮ್ಮಟೇಶ್ವರ. ಇದರಿಂದ ಮುಂದಿನ ಕಾಲದಲ್ಲಿ ಬಾಹುಬಲಿಯ ಮೂರ್ತಿಗಳು, ಕಾರ್ಕಳ, ವೇಣೂರು ಮೊದಲಾದ ಸ್ಥಳಗಳಲ್ಲಿ ಗೊಮ್ಮಟೇಶ್ವರ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ಧವಲಾದಿಸಿದ್ಧಾಂತ ಗ್ರಂಥಗಳ ಸಾರವಾಗಿ ನೇಮಿಚಂದ್ರ ಚಾವುಂಡರಾಯ ಅಥವಾ ಗೊಮ್ಮಟರಾಯನ್ನು ಕುರಿತು ಬರೆದ ಗ್ರಂಥದ ಹೆಸರು ಗೊಮ್ಮಟಸಾರ.

ಗೊಮ್ಮಟೇಶ್ವರನ ಈ ವಿಶಾಲಕಾರ ಮತ್ತು ಅದ್ವಿತೀಯ ಪ್ರತಿಮೆಯಿಂದ ಶ್ರವಣಬೆಳ್ಗೊಳ ತೀರ್ಥಕ್ಷೇತ್ರ ಮತ್ತು ಯಾತ್ರಾಸ್ಥಳವಾಗಿದೆ. ವಿಂಧ್ಯಗಿರಿಯ ಮೇಲಿನ ಬೃಹತ್ಕಾಯದ ಬಾಹುಬಲಿಯ ಪೂಜೆಯೆಂದರೆ ಒಂದು ಮಹೋತ್ಸವವೇ ಅಲ್ಲದೆ ಧಾರ್ಮಿಕ ಜನರಿಗೆ ಪುಣ್ಯಕಾರಿ ಪ್ರಯೋಜನವೂ ಹೌದು. ಈ ರೀತಿಯ ಮಹಾಮಸ್ತಕಾಭಿಷೇಕ ಪೂಜೆಯನ್ನು ಪ್ರತಿ ಹನ್ನೆರಡು ವರ್ಷಕ್ಕೆ ಒಮ್ಮೆ ಒಂದು ವಿಶೇಷ ಮುಹೂರ್ತವನ್ನು ನೋಡಿ, ನಡೆಯಿಸುವ ಪರಂಪರೆಯುಂಟು. ಶ್ರವಣಬೆಳ್ಗೊಳದ 1398ರ ಶಿಲಾಲೇಖನದಿಂದ ಪಂಡಿತಾರ್ಯ ಏಳುಸಾರಿ ಮಸ್ತಕಾಭಿಷೇಕ ಮಾಡಿಸಿದ ಸಂಗತಿಗೊತ್ತಾಗುತ್ತದೆ. ಅದರಂತೆ 1500ರಲ್ಲಿ 1612ರಲ್ಲಿಯೂ ಮಸ್ತಕಾಭಿಷೇಕವಾಗಿರಬೇಕು. 1612ರಲ್ಲಿ ಶಾಂತವರ್ಣೀ, 1677ರಲ್ಲಿ ಚಿಕ್ಕದೇವರಾಜ ಒಡೆಯರ ಮಂತ್ರಿಯಾದ ವಿಶಾಲಾಕ್ಷ ಪಂಡಿತ 1825ರಲ್ಲಿ ಮೈಸೂರು ಮಹಾರಾಜರಾದ ಮುಮ್ಮುಡಿ ಕೃಷ್ಣರಾಜ ಒಡೆಯರು ಮಾಡಿಸಿದ ಮಸ್ತಕಾಭಿಷೇಕಗಳ ಉಲ್ಲೇಖ ಉಂಟು. ಇತ್ತೀಚಿಗೆ 1827,1871, 1887, 1909 ಮತ್ತು 1925-(ಅನಂತರ ಸಾಧಾರಣ ಹನ್ನೆರಡು ವರ್ಷಕ್ಕೊಮ್ಮೆ) ಮಸ್ತಕಾಭಿಷೇಕಗಳು ನಡೆಯುತ್ತ ಬಂದಿದೆ. ಈ ಸಮಯದಲ್ಲಿ ಭಾರತದ ಎಲ್ಲ ಭಾಗಗಳಿಂದ ವಿಶೇಷವಾಗಿ ಜೈನ ಯಾಂತ್ರಿಕರು ಶ್ರವಣಬೆಳ್ಗೊಳಕ್ಕೆ ಬರುತ್ತಾರೆ. ಮಸ್ತಕಾಭಿಷೇಕದಿಂದಾಗಿ ಶ್ರವಣಬೆಳಗೊಳ ಜೈನರಿಗೆ ದಕ್ಷಿಣಕಾಶಿಯಾಗಿದೆ.

	ಶ್ರವಣಬೆಳ್ಗೊಳದ ವಿಗ್ರಹದ ಅದ್ವಿತೀಯತೆ, ಸೌಂದರ್ಯ, ಶಿಲ್ಪಸಾಹಸ, ಭವ್ಯತೆ, ಪಾವಿತ್ರ್ಯ ಮತ್ತು ವೀತರಾಗತೆಯನ್ನು ಪಾಶ್ಚಾತ್ಯ ಮತ್ತು ಪೌರಸ್ತ್ಯ ಪ್ರವಾಸಿಗಳು, ವಿದ್ವಾಂಸರು, ಲೇಖಕರು ಮತ್ತು ಕವಿಗಳು ಮುಕ್ತಕಂಠದಿಂದ ಬಣ್ಣಿಸಿದ್ದಾರೆ. 58` ಎತ್ತರವುಳ್ಳ ಈ ಬೃಹನ್ಮೂರ್ತಿಯಲ್ಲಿ ಶಿಲ್ಪಿ ಬಾಹುಬಲಿಯ ರೂಪ ಗುಣ ಸ್ವಭಾವಗಳನ್ನು ಸಹಜವೆಂಬಂತೆ ಹೊಮ್ಮಿಸಿದ್ದಾನೆ. ಆ ಮುಖದಲ್ಲಿ ತೋರುವ ಉದಾತ್ತವಾದ ಮನೋಭಾವ, ಸಂಪೂರ್ಣವಾದ ತ್ಯಾಗ, ಅತೀವ ವೈರಾಗ್ಯ, ಆತ್ಮ ಸಂಯಮಗಳೂ ಕಷ್ಟಕಾರ್ಪಣ್ಯಗಳಲ್ಲಿ ತೊಳಲುತ್ತಿರುವ ಪ್ರಪಂಚದ ಮೇಲಿನ ಮರುಕವನ್ನು ವ್ಯಕ್ತಪಡಿಸುವ ಆ ಕಿರುನಗೆಯೂ ವರ್ಣನಾತೀತವಾಗವೆ. ವಿಸ್ತಾರವಾದ ಆ ಎದೆ, ನೇರವಾದ ಆ ನಿಲುವು, ಯಾವುದಕ್ಕೂ ಹೆದರದ, ಚಕ್ರವರ್ತಿಯನ್ನು ಸೋಲಿಸಿದ ಒಂದು ಕೆಚ್ಚು-ಇವು ಆತ್ಮಾಭಿಮಾನವನ್ನು ಸೂಚಿಸುತ್ತವೆ. ಇಷ್ಟು ಉನ್ನತವಾದ ಮೂರ್ತಿಯಲ್ಲಿ ಇಂಥ ಸೌಂದರ್ಯವೂ ಇಂಥ ಅತಿಶಯವೂ ಮೇಳೈಸಿರುವುದನ್ನು ಬೇರೆಡೆ ಕಾಣುವುದು ಅಸಾಧ್ಯವೆಂದು ಬೊಪ್ಪಣಕವಿ ಹಾಡಿ ಹೊಗಳಿದ್ದಾನೆ.

	ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೆರಡು ಗೊಮ್ಮಟೇಶ್ವರ ಮೂರ್ತಿಗಳಿವೆ. ಕ್ರಿ.ಶ. 1432ರಲ್ಲಿ ವೀರಪಾಂಡ್ಯ ಕಾರ್ಕಳದಲ್ಲಿ ಪ್ರತಿಷ್ಠಿಸಿದ ಮೂರ್ತಿ 42' ಎತ್ತರವಿದೆ. ವೇಣೂರಿನಲ್ಲಿ ಚಾವುಂಡರಾಯನ ವಂಶಸ್ಥನಾದ ತಿಮ್ಮರಾಜ ಕ್ರಿ.ಶ. 1604ರಲ್ಲಿ 35`ಎತ್ತರವಿರುವ ಇನ್ನೊಂದು ಮೂರ್ತಿಯನ್ನು ನಿಲ್ಲಿಸಿದ.

	ಎತ್ತರದಲ್ಲಿ ಚಿಕ್ಕದಾದರೂ ಭವ್ಯವಾಗಿರುವ ಮತ್ತೆರಡು ಮೂರ್ತಿಗಳು ಮೈಸೂರು ಜಿಲ್ಲೆಯಲ್ಲಿವೆ. ಕೃಷ್ಣರಾಜನಗರ ತಾಲ್ಲೂಕಿನ ಬಸ್ತಿ ಹಳ್ಳಿ ಎಂಬಲ್ಲಿರುವ ಸುಮಾರು 20` ಎತ್ತರವಿರುವ ಬಳಪದ ಕಲ್ಲಿನ ಒಂದು ಮೂರ್ತಿಯನ್ನು ವಿಷ್ಣುವರ್ಧನನ ಕಾಲದಲ್ಲಿ ಆತನ ದಂಡನಾಯಕ ಪುಣಿಸಮಯ್ಯ ಪ್ರತಿಷ್ಠಿಸಿದುದಾಗಿ ತೋರುತ್ತದೆ. ಮೈಸೂರು ತಾಲ್ಲೂಕಿನ ಗೊಮ್ಮಟಗಿರಿಯ ಮೇಲೆ ನಿಂತಿರುವ ಇನ್ನೊಂದು ಮೂರ್ತಿಯನ್ನು ಯಾರು ಯಾವಾಗ ಸ್ಥಾಪಿಸಿದರು ಎಂಬುದು ತಿಳಿಯದು. ಮದ್ದೂರು ತಾಲ್ಲೂಕಿನಲ್ಲಿ ಬಸ್ತಿತಿಪ್ಟೂರಿನ ಬಳಿ ಗುಡ್ಡ ಒಂದರ ಮೇಲೆ ನಿಂತಿರುವ ಮತ್ತೊಂದು ಗೊಮ್ಮಟೇಶ್ವರನ ಮೂರ್ತಿ ಈಚೆಗೆ ಪತ್ತೆಯಾಗಿದೆ.

	ಇತ್ತೀಚೆಗೆ ಗೊಮ್ಮಟೇಶ್ವರನ ಮತ್ತೊಂದು ಬೃಹನ್ ಮೂರ್ತಿಯನ್ನು ಧರ್ಮಸ್ಥಳದಲ್ಲಿ ಪ್ರತಿಷ್ಠಾಪಿಸಲಾಗಿದೆ.. ಈ ಮೂರ್ತಿ ಸುಮಾರು 48'ಗಳಷ್ಟು ಎತ್ತರವಿದ್ದು ಅದನ್ನು ಪೀಠದ ಮೇಲೆ ನಿಲ್ಲಿಸಿದಾಗ 60`ಗಳಷ್ಟು ಎತ್ತರದ ಅದ್ಭುತ ಶಿಲಾಪ್ರತಿಮೆಯಾಗಿದ್ದು ಕಂಗೊಳಿಸುತ್ತಿದೆ. ಈ ವಿಗ್ರಹವನ್ನು ರೂಪಿಸಿದ ಶಿಲ್ಪಿ ರಂಜಾಳ ಗೋಪಾಲ ಶೆಣೈ. ಕಾರ್ಕಳದಲ್ಲಿ ಸಿದ್ಧವಾದ ಈ ಮೂರ್ತಿಯನ್ನು  ಧರ್ಮಸ್ಥಳಕ್ಕೆ ಸಕಲ ವೈಭವದೊಡನೆ ತಂದು ನಿಲ್ಲಿಸಲಾಗಿದೆ.
(ಎ.ಎನ್.ಯಂ.; ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ